ಕೆಜಿಎಫ್ ತಾಲ್ಲೂಕಿನ ಭಕ್ತಾಧಿಗಳಿಗೆ ೮೦ ಉಚಿತ ಬಸ್,ಓಂಶಕ್ತಿ ದರ್ಶನಕ್ಕೆ ಶಾಸಕಿ ರೂಪಕಲಾ ನೆರವು

ಕೋಲಾರ;- ಮೇಲ್ ಮರವತ್ತೂರು ಶ್ರೀ ಓಂ ಶಕ್ತಿ ದೇವಿ ದರ್ಶನಕ್ಕೆ ಹಾಗೂ ಶಬರಿಮಲೈಗೆ ಹೋಗುವ ಕೆಜಿಎಫ್ ತಾಲ್ಲೂಕಿನ ಭಕ್ತಾಧಿಗಳಿಗೆ ಉಚಿತವಾಗಿ ೮೦ ಬಸ್ಸುಗಳು ಹಾಗೂ ಊಟದ ವ್ಯವಸ್ಥೆ ಮಾಡಿರುವ ಶಾಸಕಿ ರೂಪಕಲಾ ಎಂ ಶಶಿಧರ್, ಧಾರ್ಮಿಕ ಕ್ಷೇತ್ರಗಳ ಭೇಟಿಗೆ ನೆರವು ನೀಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಾಮಾಜಿಕ ಕಾರ್ಯಗಳ ಮೂಲಕ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಅವರು, ಪ್ರತಿ ನಿತ್ಯವೂ ಓಂಶಕ್ತಿ ದೇವಿ ದರ್ಶನಕ್ಕೆ ಹೋಗುವ ಅದರಲ್ಲೂ ಮಹಿಳಾ ಭಕ್ತರಿಗೆ ಹೆಚ್ಚಿನ ನೆರವು ಒದಗಿಸಿದ್ದು, ಈ ವಾರವೊಂದರಲ್ಲೇ ೬೦ ಬಸ್ಸುಗಳಲ್ಲಿ ಜನತೆ ಮೇಲ್‌ಮರವತ್ತೂರು ಯಾತ್ರೆಗೆ ಹೊರಟಿದ್ದಾರೆ.
ಶ್ರೀ ಓಂ ಶಕ್ತಿ ಅಮ್ಮನವರ ದರ್ಶನಕ್ಕೆ ತೆರಳುತ್ತಿರುವ ಬಸ್ಸುಗಳಿಗೆ ಸ್ವತಃ ಪೂಜೆ ಸಲ್ಲಿಸಿ ಭಕ್ತರಿಗೆ ಶುಭ ಕೋರಿ ಕಳುಹಿಸಿದರು.
ಅದೇ ರೀತಿ ಶಬರಿಮಲೈ ಯಾತ್ರೆ ಹೊರಟಿರುವ ಪುರುಷ ಭಕ್ತರಿಗೂ ನೆರವಾಗಿರುವ ಅವರು, ಇದಕ್ಕಾಗಿಯೇ ಈ ಒಂದು ವಾರದಲ್ಲಿ ೨೦ ಬಸ್ಸು, ಉಚಿತ ಊಟದ ವ್ಯವಸ್ಥೆಯೊಂದಿಗೆ ಕಳುಹಿಸಿಕೊಟ್ಟಿದ್ದಾರೆ.
ಕೆಜಿಎಫ್ ನಗರ ಮಾತ್ರವಲ್ಲ,ತಾಲ್ಲೂಕಿನ ವ್ಯಾಪ್ತಿಯ ಬೇಗಮಂಗಲ, ಕ್ಯಾಸಂಬಳ್ಳಿ ಮತ್ತಿತರ ಗ್ರಾಮೀಣ ಭಾಗದ ಭಕ್ತರಿಗೂ ಅವರು ನೆರವಾಗಿದ್ದು, ಸಾವಿರಾರು ಭಕ್ತರು ಈ ಸೌಲಭ್ಯ ಪಡೆದುಕೊಂಡಿದ್ದಾರೆ.
ಬಸ್ಸುಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡುವ ಸಂದರ್ಭದಲ್ಲಿ ಕೆಜಿಎಫ್ ನಗರಸಭೆ ಅಧ್ಯಕ್ಷ ವಿ.ಮುನಿಸ್ವಾಮಿ, ಸದಸ್ಯರಾದ ಕರುಣಾಕರನ್, ಜರ್ಮನ್, ಪ್ರವೀಣ್, ಮುಖಂಡರಾದ ನಂದಕುಮಾರ್, ಶ್ರೀನಿವಾಸ್ ಸೇರಿದಂತೆ ಆಭಾಗದ ಎಲ್ಲಾ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *