ಕನ್ನಡ ಪರ ಸಂಘಟನೆಗಳ ಜವಾಬ್ದಾರಿ ಹೆಚ್ಚಾಗಿದೆ : ಕನ್ನಡಮಿತ್ರ ವೆಂಕಟಪ್ಪ

ಕೋಲಾರ, ಹಿಂದೆoದಿಗಿoತಲೂ ಈಗ ಕನ್ನಡ ಪರ ಸಂಘಟನೆಗಳ ಜವಾಬ್ದಾರಿ ಹೆಚ್ಚಾಗಿದೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಕನ್ನಡಮಿತ್ರ ವೆಂಕಟಪ್ಪ ಅಭಿಪ್ರಾಯಪಟ್ಟರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕನ್ನಡ ಸೇನೆಯ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು ಕನ್ನಡಸೇನೆಯ ರಾಜ್ಯಾಧ್ಯಕ್ಷರಾದ ಕೆ.ಆರ್ ಕುಮಾರ್ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಸಂಘಟನೆ ಬಲವಾಗಿ ಬೆಳೆಯುತ್ತಿದ್ದು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ತಮ್ಮ ದಿನನಿತ್ಯದ ಕಾಯಕ ಮಾಡುವ ಮೂಲಕ ಕನ್ನಡ ನೆಲ, ಜಲ, ಭಾಷೆ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ದೇಶದ ಎಲ್ಲಾ ಭಾಷೆಗಳನ್ನು ಗೌರವಿಸೋಣ, ರಾಜ್ಯಕ್ಕೆ ಅನ್ಯಾಯದವಾದರೆ ಹೋರಾಟದ ಮೂಲಕ ಉತ್ತರ ಕೊಡೋಣ ಎಂದು ಹೇಳಿದರು. ಕನ್ನಡಿಗರ ರಕ್ಷಣೆ ಜೊತೆಗೆ ಸಮಾಜಿಕ ಕಾರ್ಯಗಳಲ್ಲೂ ಕನ್ನಡ ಸೇನೆ ಮುಂಚೂಣಿಯಲ್ಲಿ ಇದೆ ಎಂದು ವೆಂಕಟಪ್ಪ ಅಭಿಪ್ರಾಯಪಟ್ಟರು.
ಕನ್ನಡ ಸೇನೆಯ ನೂತನ ಜಿಲ್ಲಾ ಗೌರವ ಅಧ್ಯಕ್ಷ ಪಿ.ನಾರಾಯಣಪ್ಪ ಮಾತನಾಡಿ ಕನ್ನಡ ಭಾಷೆಗೆ ಅನ್ಯಾಯದ ಸಂಧರ್ಭದಲ್ಲಿ ಹೋರಾಟದ ಮೂಲಕ ನಮ್ಮ ಹಕ್ಕನ್ನು ಪಡೆದುಕೊಂಡಿದ್ದೇವೆ, ರಾಜ್ಯದ ರಕ್ಷಣೆ ಪ್ರತಿಯೊಬ್ಬ ಯುವಕರ ಜವಾಬ್ದಾರಿ, ಸಂಘಟನೆ ಕನ್ನಡಿಗರನ್ನು ಎಚ್ಚರಿಸುವ ಮೂಲಕ ಎಲ್ಲಾ ವಲಯಗಳಲ್ಲಿ ಕನ್ನಡಿಗರಿಗೆ ಸಿಗಬೇಕಾದ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ಮಾಡಬೇಕೆಂದು ಕರೆ ನೀಡಿದರು.
ಇನ್ನೂ ಕನ್ನಡ ಸೇನೆ ಜಿಲ್ಲಾ ಗೌರವ ಸಲಹೆಗಾರರಾಗಿ ಸಿ.ವೆಂಕಟಕೃಷ್ಣಯ್ಯ, ನಗರಘಟಕದ ಅಧ್ಯಕ್ಷರಾಗಿ ನಾಗೇಶ್, ನಗರಘಟಕದ ಗೌರವ ಅಧ್ಯಕ್ಷರಾಗಿ ಶೇಷಗಿರಿ ನಾಯಕ್, ಜಿಲ್ಲಾ ಸಂಘಟನ ಕಾರ್ಯದರ್ಶಿಯಾಗಿ ರಾಮಚಾರಿ, ನಗರಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಧರ್, ನಗರಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಅರುಣ್, ನಗರ ಸಂಚಾಲಕರಾಗಿ ರಂಜಿತ್, ನಿರಂಜನ್ ಆಯ್ಕೆಯಾದರು. ಕನ್ನಡ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಟ್ಟರಾಜು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸಂಸದ ಎಸ್ ಮುನಿಸ್ವಾಮಿ ಶುಭ ಹಾರೈಸಿದರು.

Leave a Reply

Your email address will not be published. Required fields are marked *