ಕೋಲಾರ ಪರಿಶಿಷ್ಟ ಜಾತಿ ಪಂಗಡದವರಿಗೆ ದೌರ್ಜನ್ಯ, ಅತ್ಯಾಚಾರ ಹಾಗೂ ಅನಾವಶ್ಯಕ ಸಮಸ್ಯೆ ಉಂಟಾದಾಗ ಜಿಲ್ಲಾಡಳಿತ ಪ್ರಾಮಾಣಿಕವಾಗಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಬದ್ಧರಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅನುಸೂಚಿತ ಜಾತಿ-ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಕ್ತ ಹಾಗೂ ಅರ್ಥಪೂರ್ಣ ಚರ್ಚೆ ನಡೆದಿದ್ದು, ಎಸ್.ಸಿ-ಎಸ್.ಟಿ ಅವರ ಸಮುದಾಯದ ಸಮಸ್ಯೆಗೆ ಹಾಗೂ ಅವರ ಒತ್ತಾಸೆಗೆ ಸಮಗ್ರವಾಗಿ ಪರಿಹಾರ ದೊರಕಿಸಲು ಜಿಲ್ಲಾ ಪಂಚಾಯತ್ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸದಾ ಸಿದ್ದರಿದ್ದೇವೆ ಎಂದರು.
ಜಿಲ್ಲೆಯಾದ್ಯoತ ಎಸ್.ಸಿ-ಎಸ್.ಟಿ ಅವರಿಗೆ ಸ್ಮಶಾನ ಭೂಮಿ ಈ ಹಿಂದೆ ನೀಡಲಾಗಿದ್ದು, ನ್ಯಾಯಾಲಯ ಮಟ್ಟದ್ದಲ್ಲಿದ್ದು, ಅತೀ ಶೀಘ್ರದಲ್ಲೇ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಮಶಾನಕ್ಕಾಗಿ ಭೂಮಿ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಸಂದರ್ಭದಲ್ಲಿ ಸದಸ್ಯರೊಬ್ಬರು ಮಾತನಾಡಿ ಪ್ರತಿ ಗ್ರಾಮಗಳಲ್ಲಿ ಎಸ್.ಸಿ/ಎಸ್.ಟಿ ಅವರಿಗೆ ಸ್ಮಶಾನ ಆಂದೋಲನ ಹಮ್ಮಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಎಲ್ಲಾ ನಿಗಮ, ಮಂಡಳಿಗಳು ಬ್ಯಾಂಕ್ ಮೂಲಕ ಸರ್ಕಾರದ ರಿಯಾಯಿತಿ ಯೋಜನೆಗಳ ಎಸ್.ಸಿ/ಎಸ್.ಟಿ ಫಲಾನುಭವಿಗಳ ಅರ್ಜಿಗಳ ಪ್ರಸ್ತಾಪ ಬಂದಾಗ ಬ್ಯಾಂಕ್ಗಳು ತಮ್ಮ ಗಮನಕ್ಕೆ ತರಬೇಕೆಂದು ಸೂಚಿಸಿ, ಅತೀ ಶೀಘ್ರವಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ದೇವಾಲಯಗಳ ಪ್ರವೇಶಕ್ಕೆ ಅವಕಾಶ ನೀಡಲು ಸದಸ್ಯರು ಮನವಿ ಮಾಡಿದಾಗಿ ಮುಜರಾಯಿ ಇಲಾಖೆ ಹಾಗೂ ಉಪವಿಭಾಗಾಧಿಕಾರಿಗಳ ಮೂಲಕ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ದೇವಾಲಯಗಳಿಗೆ ಮುಕ್ತ ಪ್ರವೇಶ ದೊರಕುವಂತೆ ಕ್ರಮಕೈಗೊಳ್ಳಲು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಗಳಲ್ಲಿ ಶೇಕಡ ೬೦ ರಷ್ಟು ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆಯಿದ್ದು, ವಿದ್ಯಾರ್ಥಿನಿಲಯಗಳಲ್ಲಿ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೇತನ ಸರಿಯಾಗಿ ಹಂಚಿಕೆಯಾಗಿರುವುದಿಲ್ಲ, ಸರ್ಕಾರಕ್ಕೆ ಸಿಬ್ಬಂದಿ ನೀಡಲು ಮನವಿ ಸಲ್ಲಿಸಿದ್ದು, ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಸದಸ್ಯರ ಪ್ರಶ್ನೆಗೆ ಉತ್ತರಿಸಿದರು.
ಸಕಾಲ, ಭೂಮಿ, ಮುಂತಾದ ಯೋಜನೆಗಳ ಅಂಕಿ ಅಂಶಗಳಲ್ಲಿ ೩೦ನೇ ಸ್ಥಾನದಲ್ಲಿ ಹಿಂದುಳಿದ್ದ, ಕೋಲಾರ ಜಿಲ್ಲೆಯನ್ನು ಈಗ ೫ನೇ ಸ್ಥಾನಕ್ಕೆ ಏರಿಕೆ ಕಂಡಿರುವುದು ರಾಜ್ಯದಲ್ಲಿಯೇ ಹೆಮ್ಮೆ ತರುವ ಸಂಗತಿಯಾಗಿದೆ ಎಂದು ತಿಳಿಸಿದರು. ಇದೇ ರೀತಿಯಲ್ಲಿ ಚುನಾವಣಾ ಸಂಬAಧ ಮತಗಟ್ಟೆಗಳ ಒಟ್ಟುಗೂಡುಸುವಿಕೆ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದರು.
ನಿಗಮ ಮಂಡಳಿಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸೂಕ್ತ ಸ್ಪಂದನೆ ಲಭ್ಯವಾಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಹಯೋಗದೊಂದಿಗೆ ವ್ಯಾಪಕ ಪ್ರಚಾರ ಮಾಡಿ ಹಾಗೂ ಎಲ್ಲಾ ಕಾಲೇಜುಗಳೊಂದಿಗೆ ಸಹಯೋಗವನ್ನು ಸಾಧಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮುಂಬರುವ ದಿನಗಳಲ್ಲಿ ಪ್ರಯತ್ನಿಸಲಾಗುವುದು ಎಂದರು.
ಜಿಲ್ಲಾಡಳಿತದ ವತಿಯಿಂದ ಕೌಶಲ್ಯಾಭಿವೃದ್ಧಿ ಹಾಗೂ ವೃತ್ತಿ ತರಬೇತಿ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದರ ಯಶಸ್ಸನ್ನು ಹಾಗೂ ಅಗತ್ಯವನ್ನು ಮನಗಂಡು ಇಂತಹ ಹೆಚ್ಚಿನ ಮಟ್ಟದ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲು ಯೋಜಿಸಲಾಗುತ್ತಿದೆ. ಇದರೊಂದಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಕೆ.ಜಿ.ಎಫ್.ನಲ್ಲಿ ಪೌರಕಾರ್ಮಿಕರಿಗಾಗಿ ಮನೆಗಳನ್ನು ನಿರ್ಮಿಸಿದ್ದು, ಈ ತಿಂಗಳಲ್ಲಿ ಹಸ್ತಾಂತರಿಸಲಾಗುವುದು ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಕೆ.ಜಿ.ಎಫ್. ಪೊಲೀಸ್ ವರಿಷ್ಠಾಧಿಕಾರಿ ಶಾಂತಕುಮಾರ್, ಉಪ ವಿಭಾಗಾಧಿಕಾರಿ ವೆಂಕಟಲಕ್ಷಿö್ಮ, ಸರ್ಕಾರಿ ಅಭಿಯೋಜಕರು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸನ್, ದೌರ್ಜನ್ಯ ನಿಯಂತ್ರಣ ಜಾಗೃತಿ ಸಮಿತಿ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.