ಕೋಲಾರ, ಜಿಲ್ಲೆಯಲ್ಲಿ ಅಕ್ರಮ ಭೂ ಮಂಜೂರಾತಿ ಮಾಡಿರುವ ಪ್ರಕರಣಗಳನ್ನು ಪರಿಶೀಲಿಸಲು ೧೪ ಜನರ ತಂಡದ ಸಮಿತಿಯನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಅವರು ತಿಳಿಸಿದರು.
ಇಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಹಾಗೂ ಕೋಲಾರ ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಭೂಮಿ ಮಾನಿಟರಿಂಗ್ ಸೆಲ್‌ನಿಂದ ಕಳೆದ ೧೦ ವರ್ಷಗಳಿಂದ ಸರ್ಕಾರದಿಂದ ಮಂಜೂರು ಮಾಡಲ್ಪಟ್ಟ ಜಾಗಗಳ ಸಮೂಲಾಗ್ರ ಮಾಹಿತಿಯನ್ನು ಸಮಿತಿಗೆ ನೀಡಲಿದೆ. ಸಮಿತಿಯು ಭೂ ಲಭ್ಯತಾ ಪಟ್ಟಿ ಅನುಸಾರ ಮಂಜೂರು ಮಾಡಲಾದ ಭೂಮಿಗಳ ವಿವರಗಳನ್ನು ಸಂಗ್ರಹಿಸುತ್ತದೆ. ಈವರೆಗೆ ಮಂಜೂರು ಮಾಡಲಾದ ಜಮೀನುಗಳು ಸಕ್ರಮವಾಗಿವೆ ಅಥವಾ ಇಲ್ಲವೇ ಎಂಬುದನ್ನು ಈ ಸಮಿತಿಯು ಪರಿಶೀಲಿಸಲಿದೆ.
ಮಂಜೂರಾತಿ ದಾಖಲೆಗಳ ನೈಜತೆ, ಸಾಗುವಳಿ ಮಂಜೂರಾತಿ ನಿಯಮಗಳ ಪಾಲನೆ, ಸರ್ಕಾರಿ ಜಮೀನುಗಳ, ಅರಣ್ಯ ಜಮೀನುಗಳ, ವಖ್ಫ್ ಬೋರ್ಡ್ನ ಜಮೀನುಗಳ, ಮುಜರಾಯಿ ಜಮೀನುಗಳ, ಗೋಮಾಳಗಳ ಹಾಗೂ ನಗರಸಭೆ ಜಮೀನುಗಳ ಒತ್ತುವರಿ ಬಗ್ಗೆಯೂ ಸಹ ಈ ಸಮಿತಿಯು ಅಧ್ಯಯನ ನಡೆಸಲಿದೆ.
ಈಗಾಗಲೇ ಮಂಜೂರಾಗಿರುವ ಜಮೀನುಗಳಲ್ಲಿ ಯಾವುದೇ ನಿಯಮಾವಳಿಗಳ ಉಲ್ಲಂಘನೆಯಾಗಿದ್ದಲ್ಲಿ ಅದರ ವಿವರಗಳನ್ನು ಸಹ ಸಮಿತಿಯು ಕಲೆ ಹಾಕಲಿದೆ. ಭೂಮಿ ಮಾನಿಟರಿಂಗ್ ಸೆಲ್‌ನ ವರದಿಯಂತೆ ರಾಜಧಾನಿಗೆ ಹತ್ತಿರವಿರುವ ಕೋಲಾರದಲ್ಲಿ ಅಭಿವೃದ್ಧಿ ಪೂರಕ ವಾತಾವರಣವಿರುವುದರಿಂದ ಹಾಗೂ ಪ್ರಸ್ತುತ ಬೆಂಗಳೂರು ಚೆನ್ನೆ ಕಾರಿಡಾರ್ ಅಭಿವೃದ್ಧಿಯಾಗುತ್ತಿರುವುದರಿಂದ ಈ ಭಾಗದಲ್ಲಿ ಕೈಗಾರಿಕಾ ಕೇಂದ್ರಗಳ ಸ್ಥಾಪನೆ, ಹೊಸ ಟೌನ್‌ಶಿಪ್‌ಗಳ ನಿರ್ಮಾಣ ಮುಂತಾದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಹಲವು ಒತ್ತಡಗಳಿಂದ ಭೂ ಮಂಜೂರಾತಿ ಮಾಡುವಾಗ ಸರ್ಕಾರದ ಕಾನೂನುಗಳನ್ನು ಉಲ್ಲಂಘಿಸಿರುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಜಮೀನಿನ ಸಮರ್ಪಕ ಹಂಚಿಕೆ ಹಾಗೂ ಸ್ಪಷ್ಟ ದಾಖಲೆಗಳನ್ನು, ಮ್ಯೂಟೇಶನ್ ವಿವರಗಳನ್ನು ಅಕ್ರಮವಾಗಿ ಮಂಜೂರು ಮಾಡಿದ ಜಮೀನನ್ನು ಸಕ್ರಮ ಮಾಡುವ ವಿಧಾನ ಇವುಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿ ವರದಿ ನೀಡುವ ಸಲುವಾಗಿ ಈ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಸಂಬoಧಪಟ್ಟ ತಾಲ್ಲೂಕಿನ ಭೂ ಮಂಜೂರಾತಿಗೆ ಸಂಬoಧಿಸಿದoತೆ ಮಾಹಿತಿಯ ದತ್ತಾಂಶವನ್ನು ಭೂಮಿ ಸಮಾಲೋಚಕರ ಸಮನ್ವಯತೆಯೊಂದಿಗೆ ಭೂಮಿ ಉಸ್ತುವಾರಿ ಕೋಶದಿಂದ ಪಡೆದು ತಂತ್ರಾoಶದಲ್ಲಿ ಸಮಾಲೋಚಕರ ಪರಿಶೀಲಿಸುವುದು. ಭೂ ಮಂಜೂರಾತಿ ಮಾಡಿರುವ ಪ್ರಕರಣಗಳು ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೯೪ಎ, ೯೪ಬಿ, ಮತ್ತು ೯೪ಎ(೪) ರ ನಿಯಮಾವಳಿಗಳನ್ವಯ ಅರ್ಹ ಪ್ರಕರoಣಗಳೇ ಎಂಬ ಬಗ್ಗೆ ಕಡತ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡುವುದು. ಭೂ ಮಂಜೂರಾತಿಯು ನಿಯಮಬಾಹಿರ ಎಂದು ಕಂಡುಬoದಲ್ಲಿ, ಪ್ರಕರಣಗಳಲ್ಲಿ ಗಮನಿಸಿರುವ ಲೋಪಗಳ ಕುರಿತು ಸ್ವಷ್ಟವಾಗಿ ವಿವರಣೆ ನೀಡುವುದು. ಆಯಾ ತಾಲ್ಲೂಕು ಭೂಮಿ ಕೇಂದ್ರದ ಭೂಮಿ ತಂತ್ರಾoಶದಲ್ಲಿ ಭೂಮಂಜುರಾತಿ ಪ್ರಕ್ರಿಯೆಯನ್ನು ಕ್ರಮಬದ್ದವಾಗಿ ನಿರ್ವಹಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುವುದು. ನಿಯಮಬಾಹಿರ ಎಂದು ಕಂಡುಬoದಲ್ಲಿ ಪ್ರಕರಣಗಳಲ್ಲಿ ಗಮನಿಸಲಾಗಿರುವ ಅಂಶಗಳ ಬಗ್ಗೆ ವರದಿ ನೀಡುವುದು ಮುಂತಾದ ಜವಾಬ್ದಾರಿಗಳನ್ನು ಸಮಿತಿಗೆ ವಹಿಸಲಾಗಿದೆ.
ಕಛೇರಿ ಹಾಗೂ ಕಾರ್ಯನಿರ್ವಾಹಕ ಸಿಬ್ಬಂದಿಗಳಿಗೆ ಕಾರ್ಯ ಹಂಚಿಕೆ ಹಾಗೂ ವೃತ್ತ ಮತ್ತು ಹೋಬಳಿಗಳಿಗೆ ನಿಯೋಜಿಸಿರುವ ಕುರಿತಂತೆ ಕಛೇರಿಯಿಂದ ಹೊರಡಿಸಲಾಗಿರುವ ಹಿಂದಿನ ಹಾಗೂ ಪ್ರಸಕ್ತ ಸಾಲಿನ ಆದೇಶ, ಅಧಿಕೃತ ಜ್ಞಾಪನ, ಅಧಿಸೂಚನೆಗಳ ಪ್ರತಿಯನ್ನು ತನಿಖಾ ತಂಡಕ್ಕೆ ನೀಡುವುದು. ತನಿಖಾ ತಂಡವು ಕೋರುವ ಕಡತಗಳು ಹಾಗೂ ಅಗತ್ಯ ದಾಖಲಾತಿಗಳನ್ನು ತಪ್ಪದೇ ಹಾಜರುಪಡಿಸುವುದು. ತನಿಖಾ ತಂಡವು ಕೋರುವ ಕಡತ ಹಾಗೂ ದಾಖಲಾತಿಗಳಿಗೆ ಸಂಬoಧಿಸಿದoತೆ ಪ್ರತ್ಯೇಕವಾಗಿ ವಹಿ ನಿರ್ವಹಿಸಿ, ಸದರಿ ವಹಿಯಲ್ಲಿ ನಮೂದಿಸಿ ನಂತರ ತನಿಖಾ ತಂಡಕ್ಕೆ ನೀಡುವುದು. ತನಿಖೆ ಮುಕ್ತಾಯಗೊಂಡ ಪ್ರಕರಣಗಳಿಗೆ ಸಂಬoಧಿಸಿದ ಕಡತ ಹಾಗೂ ದಾಖಲೆಗಳನ್ನು ಮತ್ತು ತನಿಖಾ ತಂಡವು ಸೂಚಿಸುವ ಎಲ್ಲಾ ದಾಖಲಾತಿಗಳನ್ನು ತಹಶೀಲ್ದಾರರು ಖುದ್ದು ಪಡೆದು. ಪ್ರತ್ಯೇಕವಾಗಿ ಭದ್ರತೆಯೊಂದಿಗೆ ಸಂರಕ್ಷಿಸುವುದು. ಭೂಮಿ ತಂತ್ರಾoಶದಲ್ಲಿ ಭೂ ಮಂಜೂರಾತಿಗೆ ಸಂಬoಧಿಸಿದoತೆ ಅಳವಡಿಸಲಾಗಿರುವ ದಾಖಲಾತಿಗಳನ್ನು ಮುದ್ರಿಸಿಕೊಂಡು ಸಂಬoಧಪಟ್ಟ ಕಡತದಲ್ಲಿರಿಸಿ ತನಿಖಾ ತಂಡಕ್ಕೆ ನೀಡುವುದು. ಈ ಹಿಂದೆ ಕಾರ್ಯ ನಿರ್ವಹಿಸಿದ ತಹಶೀಲ್ದಾರರು, ಕಛೇರಿ ಸಿಬ್ಬಂದಿ ಹಾಗೂ ಕಾರ್ಯ ನಿರ್ವಾಹಕ ಸಿಬ್ಬಂದಿಗಳ ಮಾದರಿ ಸಹಿಗಳು ಅವಶ್ಯವಿದಲ್ಲಿ ದೃಢೀಕೃತ ದಾಖಲೆಗಳನ್ನು ಒದಗಿಸುವುದು. ತನಿಖಾ ತಂಡವು ಹೆಚ್ಚುವರಿಯಾಗಿ ಕೋರುವ ಮಾಹಿತಿ ಹಾಗೂ ದಾಖಲಾತಿಗಳನ್ನು ನೀಡುವ ವ್ಯವಸ್ಥೆ ಮಾಡುವುದು ಮುಂತಾದ ಜವಾಬ್ದಾರಿಗಳನ್ನು ಎಲ್ಲಾ ತಾಲ್ಲೂಕಿನ ತಹಸೀಲ್ದಾರರು ಸಮಿತಿಗೆ ನೀಡಬೇಕು ಎಂದರು.
ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೫ ಜನರ ತಂಡ ಇಡೀ ಜಿಲ್ಲೆಯಲ್ಲಿನ ಅಕ್ರಮ ಭೂ ಮಂಜೂರಾತಿ ಪರಿಶೀಲನೆ ಕೈಗೊಂಡಿದ್ದು, ಇಂತಹ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಅವರು ರೂಪಿಸಿಕೊಂಡಿರುವ ಯೋಜನೆಗಳ ಬಗ್ಗೆ ವಿತ್ತೃತವಾಗಿ ಚರ್ಚೆ ಮಾಡಲಾಯಿತು. ಇಲ್ಲಿನ ವಾತಾವರಣಕ್ಕನುಗುಣವಾಗಿ ಪ್ರಮುಖ ಸುಧಾರಣೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ. ಶಂಕರ್ ವಣಿಕ್ಯಾಳ್ ಅವರು ತಿಳಿಸಿದರು. ಮುಖ್ಯವಾಗಿ ಸರ್ಕಾರಿ ಜಮೀನುಗಳ ಒತ್ತುವರಿಗಳನ್ನು ತೆರವುಗೊಳಿಸುವಲ್ಲಿ ಇಂತಹ ಅಧ್ಯಯನಗಳ ವರದಿಗಳು ಪೂರಕವಾಗುತ್ತವೆ. ಜಿಲ್ಲೆಯಲ್ಲಿ ಅಕ್ರಮ ಭೂ ಮಂಜೂರಾತಿಗೆ ಕಡಿವಾಣ ಬೀಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ವಿಡಿಯೋ ಸಂವಾದದಲ್ಲಿ ಭೂ ದಾಖಲೆಗಳ ಉಪನಿರ್ದೇಶಕರಾದ ಭಾಗ್ಯಮ್ಮ, ನಗರಸಭೆ ಆಯುಕ್ತರಾದ ಶಿವಾನಂದ್, ಕೋಲಾರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.