ಪ್ರತಿ ವರ್ಷ ಏಪ್ರಿಲ್ 14 ರಂದು ವಿಶ್ವ ಜ್ಞಾನದ ದಿನವನ್ನಾಗಿ ಆಚರಿಸಲಾಗುತ್ತಿದೆ, ನಿಜವಾಗಿಯೂ ಇದು ಭಾರತೀಯರಿಗೆ ಸಂದ ಗೌರವ. ಏಕೆಂದರೆ ಎಲ್ಲಾ ಕ್ಷೇತ್ರಗಳಲ್ಲೂ ವಿಶ್ವ ತಮ್ಮದೇ ಆದ ನಾಯಕರನ್ನು ಗುರುತಿಸಿ, ಅವರವರ ನಾಯಕರನ್ನು ಮಾತ್ರ ಗೌರವಿಸುವಾಗ ಜ್ಞಾನದ ಕ್ಷೇತ್ರದಲ್ಲಿ ಮಾತ್ರ ನಮ್ಮ ಭಾರತದ ನಾಯಕರಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಗುರುತಿಸಿ ಅವರ ಹುಟ್ಟು ಹಬ್ಬದ ದಿನವನ್ನು ವಿಶ್ವಜ್ಞಾನದ ದಿನವನ್ನಾಗಿ ಆಚರಿಸುತ್ತಿರುವುದು ನಿಜಕ್ಕೂ ಭಾರತೀಯರಿಗೆ ಸಂದ ಗೌರವ ಎಂದರೆ ತಪ್ಪಾಗಲಾರದು. ಎರಡು ಸ್ನಾತಕೋತ್ತರ ಮತ್ತು ಬಾರ್ ಅಟ್ ಲಾ ಪದವಿಗಳನ್ನು ಹೊರತುಪಡಿಸಿ ನಾಲ್ಕು ಡಾಕ್ಟರೇಟ್ ಪದವಿಗಳನ್ನು ಪಡೆದವರು, ಹಲವಾರು ವಿಷಯಗಳಲ್ಲಿ ಹಲವು ಪದವಿಗಳನ್ನು ಪಡೆದ ಅವರು, ತಮ್ಮ ವೈಯಕ್ತಿಕ ಲೈಬ್ರರಿಯಲ್ಲಿ ಸುಮಾರು ಐವತ್ತು ಸಾವಿರ ಪುಸ್ತಕಗಳನ್ನು ಹೊಂದಿದ್ದರು. ಇಂತಹ ಮಹಾನ್ ಜ್ಞಾನಿಯಾದ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರ ದೃಷ್ಟಿಯಲ್ಲಿ ಭಾರತಕ್ಕೆ ಪ್ರಜಾಪ್ರಭುತ್ವ ಮತ್ತು ಸಮಾಜವಾದದ ತತ್ವಗಳು ಎಷ್ಟರ ಮಟ್ಟಿಗೆ ಅನ್ವಯಿಸುತ್ತವೆ ಮತ್ತು ಸಮಾಜವಾದದ ಬಗ್ಗೆ ಅವರಿಗೆ ಇದ್ದ ವಿಶಿಷ್ಟ ನಿಲುವು ಏನು ಎಂದು ತಿಳಿಯಬೇಕಾಗಿದೆ.
ಅಂಬೇಡ್ಕರ್ ರವರು ಇಂಗ್ಲೇಂಡ್ ನಲ್ಲಿ ಇದ್ದಾಗಲೇ ಅವರು ಲೇಬರ್ ಪಕ್ಷದ ಹಾಗೂ ಫೇಬಿಯನ್ ಸಮಾಜವಾದಿಗಳ ಪ್ರಭಾವಕ್ಕೆ ಒಳಗಾಗಿದ್ದರೂ ಸಹ ಅಂಬೇಡ್ಕರ್ ರವರಿಗೆ ಕಾರ್ಲ್ ಮಾರ್ಕ್ಸ್, ಲೆನಿನ್ ಮುಂತಾದವರ ಕ್ರಾಂತಿಕಾರಿಗಳ ಕಮ್ಯುನಿಸ್ಟ್ ಸಿದ್ಧಾಂತಗಳ ಬಗ್ಗೆ ಅಷ್ಟಾಗಿ ಒಲವು ಇರಲಿಲ್ಲ. ಏಕೆಂದರೆ ಕಮ್ಯುನಿಸ್ಟ್ ಸಿದ್ಧಾಂತಗಳು ರೂಪುಗೊಂಡ ಪಾಶ್ಚಿಮಾತ್ಯ ರಾಷ್ಟ್ರಗಳ ಪರಿಸ್ಥಿತಿಗೂ, 1789 ರಲ್ಲಿನ ಫ್ರಾನ್ಸಿನ ಮಹಾಕ್ರಾಂತಿಯ ಪರಿಸ್ಥಿತಿಗೂ, 1917 ರಲ್ಲಿನ ರಷ್ಯಾದ ಕ್ರಾಂತಿಯ ಪರಿಸ್ಥಿತಿಗೂ ಭಾರತದ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಇರುವುದಾಗಿ ಅರಿತಿದ್ದರು. ಇಲ್ಲಿ ವರ್ಗ ತಾರತಮ್ಯಕ್ಕಿಂತ ಹೆಚ್ಚಾಗಿ ಜಡ್ಡುಗಟ್ಟಿದ ಜಾತಿ ವ್ಯವಸ್ಥೆ, ಮನುವಾದ, ಸ್ಮೃತಿ, ಶೃತಿ ಮತ್ತು ಜಾತಿ ವ್ಯವಸ್ಥೆಯ ಫಲವಾಗಿ ಹುಟ್ಟಿಕೊಂಡಿರುವ ಅಸ್ಪೃಶ್ಯತೆ ಸಮಾಜದ ಪಿಡುಗಾಗಿ ಕಾಡುತ್ತಿರುವುದನ್ನು ಅರಿತಿದ್ದರು, ಗ್ರಾಮಗಳು ಅಸ್ಪೃಶ್ಯತೆಯಿಂದ ಕೂಡಿದ ನರಕ ಎಂದು ಅರಿತಿದ್ದರು. ಜಾತಿ ವ್ಯವಸ್ಥೆ ನಿರ್ಮೂಲನೆ ಆಗದ ಹೊರತೂ ಸಮ ಸಮಾಜ ನಿರ್ಮಾಣವಾಗದು ಎಂಬ ಅರಿವು ಅವರಿಗಿತ್ತು, ಜಾತಿ ವ್ಯವಸ್ಥೆ ನಿರ್ಮೂಲನೆಯಾಗಿ “ಮನುಷ್ಯ ಜಾತಿ ತಾನೊಂದೇ ವಲಂ’ ಎಂದು ಹತ್ತನೇ ಶತಮಾನದಲ್ಲಿ ಮಹಾ ಕವಿ ಪಂಪ ಹೇಳಿದ ರೀತಿ ಮಾನವರಾದ ತಾವೆಲ್ಲರೂ ಒಂದೇ ಎಂಬ ಸಹೋದರ ಭಾವನೆ ಮೂಡಿದಾಗ ಮಾತ್ರ ನಿಜವಾದ ಸಮಾಜವಾದ ಸಾಕಾರಗೊಳ್ಳುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು, ಹಾಗಾಗಿ ಸಮ ಸಮಾಜವನ್ನು ನಿರ್ಮಿಸುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಪೀಠಿಕೆಯಲ್ಲಿಯೇ ಭಾರತವು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ರಾಷ್ಟ್ರವಾಗಿಯೂ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿದ್ದು ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಮೂಲ ತತ್ವಗಳ ಆಧಾರದ ಮೇಲೆ ರೂಪುಗೊಂಡಿದೆ ಎಂಬ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವನ್ನು ರಚನೆ ಮಾಡುವುದರ ಮೂಲಕ ಸಮಾಜವಾದದ ಪರಿಕಲ್ಪನೆಯನ್ನು ವಿಭಿನ್ನ ನೆಲೆಯಲ್ಲಿ ಕಂಡವರು ನಮ್ಮ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ರವರು.
ಅವರ ಪ್ರಕಾರ ಸಮಾಜವಾದ ಎಂಬ ಸಮ ಸಮಾಜದ ಪರಿಕಲ್ಪನೆ ಪಾಶ್ಚಿಮಾತ್ಯರಿಂದ ನಾವು ಕಲಿಯಬೇಕಾಗಿಲ್ಲ ಬದಲಾಗಿ ನಮ್ಮ ಭಾರತದ ಬುದ್ಧ ತತ್ವಗಳಲ್ಲಿ ಅಡಗಿವೆ ಎಂಬುದು ಅವರ ಸ್ಪಷ್ಟ ಅಭಿಪ್ರಾಯ. ದಯೆ, ಕರುಣೆ, ಸಮಾನತೆ ಸಾರುವ ಬುದ್ಧನ ತತ್ವಗಳಲ್ಲಿಯೇ ನಿಜವಾದ ಸಮಾಜವಾದದ ಬೇರುಗಳು ಇವೆ ಎಂದು ಅಂಬೇಡ್ಕರ್ ರವರು ಅರಿತವರು ಹಾಗಾಗಿ ಪಾಶ್ಚಿಮಾತ್ಯರ ರಕ್ತ ಕ್ರಾಂತಿಯ ಕಮ್ಯುನಿಸಂ ಬದಲಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು, ಹಾಗಾಗಿ ಅವರು ರಾಜಕೀಯ ಹೋರಾಟಗಳಿಗೆ ಕಾರ್ಮಿಕರನ್ನು ಬಳಸಿಕೊಳ್ಳುವುದನ್ನು ಖಂಡಿಸುತ್ತಿದ್ದರು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾರ್ಮಿಕರನ್ನು ರಾಜಕೀಯ ವ್ಯಕ್ತಿಗಳು ಬಳಸಿಕೊಳ್ಳಬಾರದು ಎಂಬ ಸ್ಪಷ್ಟ ನಿಲುವು ಅವರದ್ದಾಗಿತ್ತು.
ಇಷ್ಟಕ್ಕೂ “ಸಮಾಜವಾದ” ಎಂದರೇನು ಎಂದು ಅರಿಯುವುದಾದರೆ, ಒಂದು ಸಾಮಾನ್ಯ ಅಭಿಪ್ರಾಯದ ಪ್ರಕಾರ “ಎಲ್ಲಾ ಜನರು ಸಮಾನರಾಗಿದ್ದು ರಾಜ್ಯದ ಸಂಪತ್ತಿನಲ್ಲಿ ಸಮಾನ ಪಾಲು ಪಡೆಯುವುದಾಗಿದೆ”. ಹಾಗೆಯೇ “ಸಮತಾವಾದ” ಎಂದರೆ ಏನು ಎಂಬ ಬಗ್ಗೆ ಅರಿಯುವುದಾದರೆ “ವರ್ಗ ರಹಿತ ಸಮಾಜ ನಿರ್ಮಾಣ ಮಾಡುವುದಾಗಿದೆ”, ಹಾಗೆಯೇ “ಸಮಾನತೆ” ಎಂದರೆ, ಪ್ರತಿಯೊಬ್ಬರಿಗೂ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಮಾನ ಹಕ್ಕು ಮತ್ತು ಅವಕಾಶ ನೀಡುವುದಾಗಿದೆ. ಇದೇ ವಿಚಾರವನ್ನು ಭಾರತದ ಸಮಾಜವಾದದ ಪಿತಾಮಹ ಎಂದು ಕರೆಯಲ್ಪಡುವ ಆಚಾರ್ಯ ನರೇಂದ್ರದೇವ ರವರು “ಸಮಾಜವಾದದ ಮೂಲ ಉದ್ದೇಶವು ಗುಲಾಮಗಿರಿ, ಅಸಮಾನತೆಯನ್ನು ಹೋಗಲಾಡಿಸಿ, ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹೋದರ ಭಾವವನ್ನು ಮೂಡಿಸುವುದಾಗಿದೆ” ಎಂದು ವ್ಯಾಖ್ಯಾನಿಸಿದ್ದಾರೆ, ಇದನ್ನು ಏಕೀಭವಿಸಿ ಈ ಸ್ವಾತಂತ್ರ್ಯ ಸಮಾನತೆ, ಸಹೋದರತ್ವ ಎಂಬ ವಿಚಾರಗಳು ಸಮಾಜದ ದಾರಿ ದೀಪಗಳು ಎಂದು ಸಮಾಜವಾದಿ ಚಿಂತಕ ಜಯಪ್ರಕಾಶ್ ನಾರಾಯಣ್ ರವರು ಸಹ ಅಭಿಪ್ರಾಯ ಪಟ್ಟಿದ್ದಾರೆ.
ಸಮಾಜವಾದದ ಬಗ್ಗೆ ಅಂಬೇಡ್ಕರ್ ರವರ ಒಲವು ನಿಲುವು ಪರಿಶೀಲಿಸುವುದಾದರೆ ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಹೆಚ್ಚು ಮುಂಚೂಣಿಯಲ್ಲಿದ್ದ ಸಂದರ್ಭದಲ್ಲಿ ಸಹ ಅಂಬೇಡ್ಕರ್ ರವರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಳ್ಳುವ ಬದಲಾಗಿ 1936 ರಲ್ಲಿ “ಇಂಡಿಪೆಂಡೆಂಟ್ ಲೇಬರ್ ಪಾರ್ಟಿ” ಎಂಬ ಸಮಾಜವಾದಿ ತತ್ವದ ರಾಜಕೀಯ ಪಕ್ಷವನ್ನು ಪ್ರಾರಂಭ ಮಾಡಿದರು, ಹಾಗೆಯೇ ತಮ್ಮ ತತ್ವ ಮತ್ತು ಸಿದ್ಧಾಂತಗಳನ್ನು ತಮ್ಮದೇ ಆದ “ಮೂಕ ನಾಯಕ” “ಜನತಾ”, “ಪ್ರಬುದ್ಧ ಭಾರತ” “ಬಹಿಷ್ಕೃತ ಭಾರತ” ಮುಂತಾದ ಹಲವಾರು ಪತ್ರಿಕೆಗಳ ಮೂಲಕ ಸಾರುತ್ತಿದ್ದರು. ಹೀಗಾಗಿಯೇ 1938 ರಲ್ಲಿ ಪತ್ರಿಕೆಯೊಂದರ ಸಂದರ್ಶನದಲ್ಲಿ ಅಂಬೇಡ್ಕರ್ ರವರನ್ನು “ನೀವು ಕಾಂಗ್ರೆಸ್ ಏಕೆ ಸೇರುವುದಿಲ್ಲ” ಎಂದು ಪ್ರಶ್ನೆ ಮಾಡಿದಾಗ “ಏಕೆಂದರೆ ನಾನು ಸೋಷಿಯಲಿಸ್ಟ್” ಎಂದು ನೇರವಾಗಿ ಉತ್ತರಿಸುತ್ತಾರೆ. ಹೀಗೆ ಅಂಬೇಡ್ಕರ್ ರವರಿಗೆ ಸಮಾಜವಾದದ ಬಗ್ಗೆ ಒಲವು ಇದ್ದರೂ ಅವರದ್ದು ವಿಭಿನ್ನ ನಿಲುವು.
ಡಾ. ರಾಮ ಮನೋಹರ ಲೋಹಿಯಾ ರವರು ಸಹ ಪಾಶ್ಚಾತ್ಯರ ಸಮಾಜವಾದದ ರಕ್ತ ಕ್ರಾಂತಿಯ ತತ್ವಕ್ಕೆ ಕಟ್ಟು ಬೀಳದೆ ಹೇಗೆ ಮಹಾತ್ಮ ಗಾಂಧಿಯವರ ಅಹಿಂಸಾ ತತ್ವದಲ್ಲಿ ಸಮಾಜವಾದವನ್ನು ಕಂಡುಕೊಂಡರೋ, ಅದೇ ರೀತಿಯಲ್ಲಿ ಅಂಬೇಡ್ಕರ್ ರವರು ಸಹ ಸಮಾಜವಾದದ ಮೂಲ ನೆಲೆಯನ್ನು ಗಾಂಧೀಜಿವರಿಂದ ಪಡೆಯಲಿಲ್ಲ ಬದಲಾಗಿ ಬುದ್ಧನ ತತ್ವಗಳಿಂದ ಪಡೆದರು. ವರ್ಗರಹಿತ, ತಾರತಮ್ಯ ರಹಿತ ಸಮಾಜ ನಿರ್ಮಾಣ ಆಗಬೇಕಾದರೆ ಮೊದಲು ಭಾರತದಲ್ಲಿ ನೆಲೆಯೂರಿರುವ ಅಸ್ಪೃಶ್ಯತೆ ನಿವಾರಣೆ ಆಗಬೇಕು, ಅಸ್ಪೃಶ್ಯತೆ ನಿವಾರಣೆಯಾಗದೆ, ದುರ್ಬಲ ವರ್ಗದ ವಿಮೋಚನೆ ಆಗದು ಎಂಬ ಬಗ್ಗೆ ಅಂಬೇಡ್ಕರ್ ರವರು ಸ್ಪಷ್ಟವಾಗಿ “Annihilation of Caste” ಎಂಬ ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ. ದಲಿತರಿಗೂ ಸಮಾನ ಹಕ್ಕಿಗಾಗಿ 1927 ರಲ್ಲಿ ಚೌಡರ ಕೆರೆಯ ನೀರಿನ ಹೋರಾಟವನ್ನು ಹಾಗೂ 1930 ರಲ್ಲಿ ನಾಸಿಕ್ ನಲ್ಲಿ ಕಾಳಾರಾಮ್ ದೇವಸ್ಥಾನ ಪ್ರವೇಶಕ್ಕೆ ಚಳುವಳಿಯನ್ನು ಮಾಡಿದರು, ಇವರು ದಲಿತರ ಮತ್ತು ಹಿಂದುಳಿದ ವರ್ಗಗಳ ಹಿತಾಸಕ್ತಿಗಾಗಿ ಕೇವಲ ಭಾರತದಲ್ಲಿ ಹೋರಾಟ ಮಾಡಿದ್ದಲ್ಲದೆ, ಅಸ್ಪೃಶ್ಯತೆ, ಅಸಮಾನತೆಯ ಬಗ್ಗೆ 1930 ರಲ್ಲಿ ಇಂಗ್ಲೇಂಡ್ ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಸಹ ಇಂಗ್ಲೇಂಡ್ ನ ಪ್ರಧಾನಿಯರವರ ಎದುರು ಮಂಡನೆ ಮಾಡಿ ಅವರ ಗಮನ ಸೆಳೆದು ಭಾರತದಲ್ಲಿನ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಜಾತಿಗಳ ಶೋಷಿತ ವರ್ಗಗಳಿಗೆ ಸಮಾನ ನಾಗರೀಕ ಹಕ್ಕುಗಳು, ಸಾರ್ವಜನಿಕ ಕೆರೆ, ದೇವಸ್ಥಾನಗಳಿಗೆ ಮುಕ್ತ ಪ್ರವೇಶ ನಿಡುವ ಹಕ್ಕುಗಳಿಗೆ ಅವಕಾಶ ಸಿಗುವಂತೆ ಸಕಾರಾತ್ಮಕ ಬೆಳವಣಿಗೆ ಪಡೆಯಲು ಸಫಲರಾದರು.
ಮಾರ್ಕ್ಸ್ ಸಿದ್ಧಾಂತದಿಂದ ಅಂತರ ಕಾಯ್ದುಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ರವರು ಸಾಮಾಜಿಕ ಜನತಂತ್ರವು ಕೇವಲ ರಾಜಕೀಯ ಸಮಾನತೆಯಿಂದ ಸಾಲದು, ಬದಲಾಗಿ ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸಮಾನತೆ ನೀಡಿದಾಗ ಮಾತ್ರ ಸಾಧ್ಯ ಎಂದು ಅರಿತಿದ್ದರು. ಅದಕ್ಕಾಗಿಯೇ ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾದ ಅಂಬೇಡ್ಕರ್ ರವರು ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಸಂವಿಧಾನದ ಪ್ರಸ್ತಾವನೆಯಲ್ಲಿ “ಸ್ವಾತಂತ್ರ್ಯ” “ಸಮಾನತೆ” ಮತ್ತು “ಸಹೋದರ ಭಾವ” ಎಂಬ ಆದರ್ಶಗಳನ್ನು ಸೇರಿಸಿದರು. ನಮ್ಮ ಭಾರತದ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಅನ್ವಯಿಸುವ ಸಂವಿಧಾನ ರಚನೆ ಮಾಡಿದ್ದರು. ಆದ್ದರಿಂದ ಇವರು ತೀರಾ ರಕ್ತ ಕ್ರಾಂತಿಯ ಕಮ್ಯುನಿಸಂ ಬದಲಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಸಂವಿಧಾನದ ಅಡಿಯಲ್ಲಿ ಮತದಾನದ ಮೂಲಕ ತಮ್ಮ ಹಕ್ಕು ಅವಕಾಶ ಪಡೆಯಬೇಕೆ ಹೊರತು ರಕ್ತಕ್ರಾಂತಿಯ ಅಸಂವಿಧಾನಿಕ ಹೋರಾಟಗಳ ಅಗತ್ಯತೆ ಇಲ್ಲವೆಂದು ಭಾವಿಸಿದ್ದರು. ಪ್ರಜಾಸತ್ತೆಯು ಜನತೆಯ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ರಕ್ತಪಾತವಿಲ್ಲದೆ ತರುವ ವಿಧಾನವಾಗಿದೆ ಎಂದು ನಂಬಿದ್ದವರು, ಸಂವಿಧಾನದಲ್ಲಿ ನಂಬಿಕೆ ಹೊಂದಿದವರು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿದ್ದವರು. ಹಾಗಾಗಿ ವರ್ಗರಹಿತ, ಜಾತಿ ರಹಿತ ಸಮಾಜದ ನಿರ್ಮಾಣಕ್ಕಾಗಿ ಸ್ವಾತಂತ್ರ್ಯ ನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ತೀರಾ ಮಾರ್ಕ್ಸ್ ವಾದಿ ಪಕ್ಷದೊಂದಿಗೆ ಗುರುತಿಸಿಕೊಳ್ಳದೆ ಎಸ್ ಸಿ ಎಫ್ ಮತ್ತು ಕೆಲವು ಸಮಾಜವಾದಿ ಪಕ್ಷಗಳೊಂದಿಗೆ ವೇದಿಕೆ ಹಂಚಿಕೊಂಡು ಸಮಾಜವಾದಿ ಪಕ್ಷದ ಅಶೋಕ ಮೆಹತಾ ರವರೊಂದಿಗೆ ಉತ್ತರ ಮುಂಬಯಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ, ಕೆಲವು ಕಮ್ಯುನಿಷ್ಟ್ ರ ಕುತಂತ್ರದಿಂದ ಸೋಲುತ್ತಾರೆ.
ಅಂಬೇಡ್ಕರ್ ರವರು ಸಮ ಸಮಾಜ ನಿರ್ಮಾಣವಾಗಬೇಕಾದರೆ ಕೇವಲ ಜಾತಿ ಪದ್ಧತಿ ನಿರ್ಮೂಲನೆ ಅಷ್ಟೇ ಅಲ್ಲ ಬದಲಾಗಿ ಜನರ ಆರ್ಥಿಕ ಸ್ಥಾನಮಾನ ಸುಧಾರಣೆಯಾಗಬೇಕು, ಮಹಿಳೆಯರ ಸ್ಥಾನಮಾನ ಬದಲಾಗಬೇಕು ಹಾಗಾದಾಗ ಮಾತ್ರ ನಿಜವಾದ ಸಮಾಜವಾದ ಸಾಕಾರಗೊಳ್ಳುತ್ತದೆ ಎಂದು ಅರಿತಿದ್ದರು. ಈ ಕಾರಣದಿಂದ ಮಹಿಳೆಯರ ಹಕ್ಕುಗಳನ್ನು ಉನ್ನತೀಕರಿಸುವ ‘ಹಿಂದು ಕೋಡ್ ಬಿಲ್’ ತಿರಸ್ಕಾರ ವಾದಾಗ ಮಹಿಳೆಯರಿಗೆ ಸಾಮಾಜಿಕ ನ್ಯಾಯ ಸಿಗದ ಕಡೆ ತಾನು ಇರುವುದಿಲ್ಲ ಎಂದು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಆದಕಾರಣ ಸಮಾಜವಾದಿ ನಾಯಕರಾದ ಡಾ. ರಾಮ ಮನೋಹರ ಲೋಹಿಯಾ ರವರು ಅಂಬೇಡ್ಕರ್ ರವರನ್ನು ಕುರಿತು ಇವರು ಕೇವಲ ಹರಿಜನರ ನಾಯಕರಲ್ಲ ಬದಲಾಗಿ ಭಾರತದ ನಾಯಕರು ಎಂದು ಕರೆದಿದ್ದರು.
ಹೀಗೆ ಸರ್ವರಲ್ಲಿ ಸಮಾನತೆ, ಅಹಿಂಸೆ, ದಯೆ ಮತ್ತು ಕರುಣೆಯನ್ನು ಬೋಧಿಸುವ ಬೌದ್ಧ ಧರ್ಮ ತತ್ವಗಳಲ್ಲಿ ನಿಜವಾದ ಸಮಾಜವಾದ ಕಂಡ ಅಂಬೇಡ್ಕರ್ ರವರು ಬೌದ್ಧ ಧರ್ಮದಿಂದ ಪ್ರಭಾವಿತರಾದರು, 1935 ರಲ್ಲಿಯೇ ತಾನು ಹಿಂದುವಾಗಿ ಜನಿಸಿದ್ದರೂ ಹಿಂದೂವಾಗಿ ಸಾಯುವುದಿಲ್ಲ ಎಂದು ಘೋಷಿಸಿದ್ದ ಅಂಬೇಡ್ಕರ್ ರವರು ದಿನಾಂಕ:14-10-1956 ಸುಮಾರು ನಾಲ್ಕು ಲಕ್ಷ ದಲಿತರೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿ ದಿನಾಂಕ:06-12-1956 ರಂದು ಬೌದ್ಧ ಧರ್ಮದವರಾಗಿ ನಿಧನಹೊಂದಿದರು. ಹೀಗೆ ಸಮಾಜವಾದಿ ತತ್ವಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಳವಡಿಸಿಕೊಟ್ಟ ಶ್ರೇಷ್ಠ ಚಿಂತಕ ಹಾಗೂ ಮಹಾನಾಯಕ ಅಂಬೇಡ್ಕರ್ ರವರು. ಇಂತಹ ಮಹಾ ನಾಯಕನ ಕನಸು ನನಸಾಗಬೇಕಾದರೆ ಪ್ರಜಾಪ್ರಭುತ್ವದ ಬೇರು ಮತದಾನದಲ್ಲಿ ಇದೆ. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಉತ್ತಮ ನಾಯಕನನ್ನು ಆಯ್ಕೆ ಮಾಡಿದಾಗ ಮಾತ್ರ ಸಮ ಸಮಾಜ ನಿರ್ಮಾಣವಾಗುತ್ತದೆ.
ರಚನೆ: ಬಿ.ಆರ್.ರವೀಂದ್ರ (ರಾಣಾ)
ವಕೀಲರು ಮತ್ತು ಸಾಹಿತಿಗಳು ಕೋಲಾರ.